ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಭಾವನೆಗಳೀಗ ಬಲು ಕಾಸ್ಲಿ!

5000 ವರ್ಷಗಳಿಗೆ ಹಿಂದೆ ಚಕ್ರವನ್ನು ಕಂಡುಹಿಡಿದ ಆಗಂತುಕನಿಗೆ ಬಹುಶಃ ವೈಜ್ಞಾನಿಕ ಆವಿಷ್ಕಾರಗಳು ಇಷ್ಟು ಮುಂದುವರೆಯಬಹುದು ಅನ್ನಿಸಿತ್ತೋ ಇಲ್ಲವೋ. ಆತ ಅಂದು ಭಾರ ಹೊರಲು ಮತ್ತು ಪ್ರಯಾಣಕ್ಕಾಗಿ ಚಕ್ರವನ್ನು ಹೋಲುವ ಒಂದು ಸುಲಭ ಸಾಧನವನ್ನು ಹೇಗೋ ಕಂಡುಹಿಡಿದುಬಿಟ್ಟಿದ್ದ. ಕ್ರಮೇಣ ಆ ಚಕ್ರದಂತಹ ಸಾಧನ ಬದಲಾವಣೆಗಳನ್ನು ಕಾಣುತ್ತಾ ದುಂಡಗಾಯಿತು. ಅಲ್ಲಿಂದ ಮರ, ಕಬ್ಬಿಣ, ಟೈರು ಗಾಲಿಗಳಾಗಿ ಮಾರ್ಪಾಡು ಹೊಂದುತ್ತಾ ಆಧುನಿಕ ಜಗತ್ತಿನತ್ತ ಉರುಳುತ್ತಾ ಬಂತು.

 ಹೀಗೆ ಚಕ್ರದಿಂದ ಆರಂಭಗೊಂಡ ವೈಜ್ಞಾನಿಕ ಆವಿಷ್ಕಾರ ಇಂದು ಬಹುದೂರ ಬಂದು ನಿಂತುಬಿಟ್ಟಿದೆ. ನಿಂತುಬಿಟ್ಟಿದೆ ಅನ್ನುವುದಕ್ಕಿಂತಲೂ ಇನ್ನಷ್ಟು ದೂರಕ್ಕೆ ದಾಪುಗಾಲು ಹಾಕುತ್ತಿದೆ. ಇವತ್ತು ನಾವು (ಕಾಸಿದ್ದರೆ!) ಗಂಟೆಯೊಳಗೆ ಊರಿಂದ ಊರಿಗೆ, ದೇಶದಿಂದ ದೇಶಕ್ಕೆ ನಿರಾಯಾಸವಾಗಿ ಹೋಗಬಲ್ಲೆವು. ಕೂತಲ್ಲಿಂದಲೇ ಸಾಗರದಾಚೆಯ ಊರಿನವರನ್ನು ಸಂಪರ್ಕಿಸಬಲ್ಲೆವು. ಬೇಕೆನಿಸಿದರೆ ಚಂದ್ರಲೋಕಕ್ಕೂ ಹಾರಬಲ್ಲೆವು!

ಮಿತ್ರನ ಪತ್ರಕ್ಕಾಗಿ 3-4 ದಿನಗಳವರೆಗೆ ಕಾಯುತ್ತಿದ್ದ ಕಾಲವೀಗ ಬದಲಾಗಿದೆ. ದೇಶದ ಯಾವ ಮೂಲೆಯಿಂದಲೂ (ನೆಟ್ವರ್ಕ್ ಸಿಗುತ್ತಿದ್ದರೆ!) ಓಮನ್, ಸೌದಿ, ಅಮೆರಿಕಾದಲ್ಲಿರುವ ಸ್ನೇಹಿತನೊಂದಿಗೆ ವೀಡಿಯೋ ಚಾಟ್ ಮಾಡುವಷ್ಟು ಜಗತ್ತೀಗ ಚಿಕ್ಕದಾಗಿಬಿಟ್ಟಿದೆ. ಸುದ್ದಿಗಳಿಗಾಗಿ ಮುಂಜಾನೆಯ ಪತ್ರಿಕೆಗಾಗಿ ಕಾಯಬೇಕಾಗಿಲ್ಲ; ಪುಟಾಣಿ ಮೊಬೈಲ್ ಮೂತಿಯೊಳಗೇ ಈಗ ಎಲ್ಲಾ ಸುದ್ದಿಗಳು ಸಿಕ್ಕುಬಿಡುತ್ತವೆ. ಭೂಮಿ ಅಷ್ಟು ಹತ್ತಿರವಾಗಿಬಿಟ್ಟಿದೆ, ಆದರೆ ಈಗೀಗ ಭಾವನೆಗಳು ಮಾತ್ರ ಬಲು ಕಾಸ್ಲಿಯಾಗಿವೆ.

ಒಂದೇ ಹಾಸ್ಟೆಲಿನಲ್ಲಿ ಆರೇಳು ವರ್ಷಗಳ ಕಾಲ ಕಿತ್ತಾಡಿ-ಫೈಟ್ ಮಾಡುತ್ತ ನೆಲದಲ್ಲಿ ಉರುಳಾಡಿ ಬೆಳೆದಿದ್ದ ಚಡ್ಡೀದೋಸ್ತ್ ಮೊನ್ನೆ ಕೊಟ್ಟಿಗೆಹಾರ ಬಸ್ಟಾಪಿನಲ್ಲಿ ಅಚಾನಕ್ ಸಿಕ್ಕಿದ್ದ. ಹಾಸ್ಟೆಲ್ನಲ್ಲಿದ್ದಾಗ ಪರಸ್ಪರ ಹಂಚಿಕೊಂಡಿದ್ದ ಭಾವನೆಗಳಿಗೀಗ ಬರಗಾಲವೆದ್ದಿದೆ ಅನ್ನುವ ಹಾಗೆ ನನ್ನ ಮೂತಿಯನ್ನು ನೋಡಿದವನೇ ಶುಷ್ಕ ನಗೆಯೊಂದನ್ನು ಬೀರಿ ಮತ್ತೆ ಮೊಬೈಲ್ ಪರದೆಯೊಳಗೆ ಹುಗಿದುಹೋಗಿಬಿಟ್ಟ. ಆತನನ್ನು ಆತ್ಮೀಯವಾಗಿ ತಬ್ಬಿ ಮಾತನಾಡಿಸಬೇಕು ಅಂದುಕೊಂಡಿದ್ದ ನಾನು ಒಂದುಕ್ಷಣ ಅವನನ್ನೇ ನೋಡುತ್ತಾ ಕಲ್ಲಾಗಿಬಿಟ್ಟೆ. ಆ ಹೊತ್ತು ಆಪ್ತರೊಳಗೂ ಭಾವನೆಗಳು ಅದೆಷ್ಟು ಬಡವಾಗಿಬಿಟ್ಟಿದೆ ಅನ್ನಿಸಿತು.

ಗೆಳತಿಯೊಬ್ಬಳ ಮೆಸೇಜು ಓದಲಿಕ್ಕೋಸ್ಕರವೇ ಪ್ರತೀದಿನ ಸೈಬರ್ಗೆ ಹೋಗಿ ಇ-ಮೇಲ್ ಚೆಕ್ ಮಾಡುತ್ತಿದ್ದ ದಿನವೊಂದಿತ್ತು. ಈಗ ನಮ್ಮಿಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಪರಸ್ಪರ ಸಂಪರ್ಕಿಸಲು ಫೇಸ್ಬುಕ್, ವಾಟ್ಸ್ಯಾಪ್, ಹೈಕ್, ಇಮೋ ವೀಡಿಯೋಚಾಟ್, ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಆಪ್ಶನ್‌ಗಳಿವೆ. ಆದ್ರೆ ಸಂಪರ್ಕಿಸುರುವುದು ಮಾತ್ರ ಅಮವಾಸೆಗೊಂದು, ಹುಣ್ಣಿಮೆಗೊಂದು ಸಾರಿ. ಕೆಲವೊಮ್ಮೆ ನಮ್ಮ ಸಂವಹನಕ್ಕೆ ಗ್ರಹಣ ಹಿಡಿಯೋದೂ ಇದೆ. ಆಧುನಿಕತೆಯ ಆಡಂಬರಕ್ಕೆ ತೆರೆದುಕೊಂಡಷ್ಟೂ ಮನಸ್ಸು, ಭಾವನೆ, ಸಂಬಂಧಗಳು ಎಷ್ಟು ನೀರಸವಾಗುಬಿಡುತ್ತವೆ ಅಲ್ಲವೆ?


ಹಿಂದೆ ಸಣ್ಣ ಅವಘಡಗಳು ಸಂಭವಿಸಿದರೂ ಸ್ವಾರ್ಥ ಮರೆತು ಸಹಾಯಕ್ಕಾಗಿ ಧಾವಿಸುತ್ತಿದ್ದ ನಮ್ಮೊಳಗಿನ
ಭಾವಸಂಬಂಧಗಳು ಈಗ ಯಾಕಿಷ್ಟು ತೇಲುಗಣ್ಣು ಬಿಡುತ್ತಿದ್ದಾವೊ? ಈಗೀಗ ಅವಘಡಗಳು ಸಂಭವಿಸಿದಾಗ ಹೆಚ್ಚಿನಸಾರಿ ನಮಗ್ಯಾಕೆ ಬೇಕು ಉಸಾಬರಿ ಅಂತ ಕಲ್ಲು ಮನಸ್ಸಿನವರ ಹಾಗೆ ಸೀದಾ ನಡೆದುಬಿಡುತ್ತೇವೆ. ಈಗೀಗ ಆ ಟ್ರೆಂಡೂ ಬದಲಾಗಿಬಿಟ್ಟಿದೆ; ಅಪಘಾತವಾಗಿ ರಸ್ತೆ ಬದಿಯಲ್ಲಿ ಅರ್ಧ ದೇಹವೇ ತುಂಡಾಗಿ ನರಳಾಡುತ್ತಿರುವ ವ್ಯಕ್ತಿಯನ್ನು ವೀಡಿಯೋ ಮಾಡುತ್ತೇವೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತೇವೆ. ಇವತ್ತು ನಾವು ಸೆಲ್ಫಿ ತೆಗೆದುಕೊಳ್ಳುತ್ತೇವೆ, ನಾಳೆ ನಾವು ಹೆಣವಾಗಿ ಬಿದ್ದಾಗ ಇನ್ನೊಬ್ಬ ಸೆಲ್ಫಿ ತೆಗೆದು ನಾವು ಹೆಣವಾಗಿ ಬಿದ್ದಿರುವ ಫೋಟೋವನ್ನು ಸ್ನೇಹಿತನಿಗೆ ವಾಟ್ಸ್ಯಾಪ್ ಮಾಡುತ್ತಾನೆ. ಇದು ಇಂದಿನ ನಿರ್ಭಾವುಕ ಜಗತ್ತಿನ ವಾಸ್ತವ ಸ್ಥಿತಿಗತಿ!

ಕಾಲ ಬದಲಾದಂತೆಲ್ಲಾ ಅಭಿರುಚಿಗಳೂ ಮಗ್ಗಲು ಬದಲಾಯಿಸುತ್ತವೆ. ಅಜ್ಜೀ ಕತೆ ಕೇಳೋದು ಬಿಡಿ, ಈಗ ಕತೆ ಪುಸ್ತಕ ಓದುವ ಮಕ್ಕಳು ಸಿಗುವುದೂ ಅಷ್ಟಕ್ಕಷ್ಟೇ. ಈಗಿನ ಮಕ್ಕಳದೇನಿದ್ದರೂ ವೀಡಿಯೋ ಗೇಮ್ಸ್, ಪಬ್ಜಿ, ಫ್ರಿಫೈರ್, ಟಿವಿ ಸೀರಿಯಲ್ಲುಗಳದ್ದೇ ಲೋಕ. ಊರಿನಲ್ಲಿ ಜಾತ್ರೆಯಿದ್ದಾಗ ತಂಗಿಯಲ್ಲಿ, 'ಜಾತ್ರೆಗೆ ಹೋಗಿ ಬರೋಣ ಬಾರೆ' ಅಂದೆ. ಅದಕ್ಕವಳು, 'ನಂಗೆ ಸೀರಿಯಲ್ ನೋಡ್ಲಿಕ್ಕಿದೆ, ನೀನೇ ಹೋಗಿ ಬಾ' ಅನ್ನುತ್ತ ಹಿಂದಿ ಸೀರಿಯಲ್ಲು ಹಚ್ಚಿಕೊಂಡು ಕೂತುಬಿಡಬೇಕೆ?! ನಾಳೆ ಹೇಗೂ ರಜೆಯಿದೆ. ಸೇಮ್ ಸೀರಿಯಲ್ ಎಪಿಸೋಡ್ ನಾಳೆನೂ ರೀ-ಟೆಲಿಕಾಸ್ಟ್ ಆಗುತ್ತೆ. ಆದ್ರೆ ಜಾತ್ರೆ ಇವತ್ತು ಮುಗಿದ್ರೆ ಮತ್ತೆ ಬರೋದು ಮುಂದಿನ ವರ್ಷವೇ ಅಲ್ಲವೆ? ಅಂತ ಮನಸ್ಸಿನಲ್ಲೇ ಅಂದುಕೊಂಡು ನಾನೊಬ್ಬನೇ ಜಾತ್ರೆಗೊಂದು ಸುತ್ತು ಹಾಕಿ ಬಂದೆ. ಹಿಂದಿರುಗುವಾಗ ಮನೆಯಲ್ಲಿ ತಂಗಿ ಮತ್ತೊಂದು ಸೀರಿಯಲ್ಲು ಹಚ್ಚಿ ಟೀವಿಯನ್ನೇ ದುರುಗುಟ್ಟುತ್ತ ಅದರೊಳಗೇ ಕಳೆದುಹೋಗಿದ್ದಳು!


ಹೇಳಿಕೇಳಿ ಇದು ಆಧುನಿಕತೆಯ ಅಬ್ಬರದ ಕಾಲ. ಕಪ್ಪು ಮಣ್ಣು, ಹಸಿರು ಹಬ್ಬವೆಲ್ಲಾ ಕರಗಿ ಕಾಂಕ್ರೀಟು ಕಟ್ಟಡಗಳೇ ಹೆಚ್ಚು ಕಣ್ಣಿಗೆ ಬೀಳುತ್ತಿವೆ. ಆಧುನಿಕತೆಯ ಸೋಗಿನಲ್ಲಿ ಇಂದು ಮನುಷ್ಯ ನಡುವಿನ ಸಂಬಂಧಗಳೂ ಕಡಿಮೆಯಾಗುತ್ತಿವೆ. ಇದ್ದಕ್ಕೆ ಇಂಥದ್ದೇ ಕಾರಣವೆಂದು ಹೇಳಲಾಗದು. ಕಾಲ ಬದಲಾದಂತೆ ವಿಚಾರಗಳೂ, ಮನಸ್ಥಿತಿಯೂ ಬದಲಾಗೋದು ಸಹಜವೆ. ಆದರೆ ಆಧುನಿಕತೆಯ ಈ ಕಾಲಘಟ್ಟದಲ್ಲೂ ಆತ್ಮೀಯ ಸಂಬಂಧಗಳನ್ನು ಕಾಪಿಟ್ಟುಕೊಳ್ಳಬಹುದು. ಅಪರೂಪಕ್ಕೊಮ್ಮೆಯಾದರೂ ಹಳೆಯ ಸ್ನೇಹಿತನಿಗೆ ವಾಟ್ಸ್ಯಾಪ್ ಮೆಸೇಜ್ ಹಾಕಿ ಹ್ಯಾಗಿದ್ದೀಯ ಮಾರಾಯ ಅಂತ ಕೇಳೋಣ. ನಾವು ಜೊತೆಯಾಗಿದ್ದಾಗಿನ ಅಪರೂಪದ ಫೋಟೋವನ್ನು ಅವನೊಂದಿಗೆ ಶೇರ್ ಮಾಡಿಕೊಳ್ಳೋಣ. ಯಾವ ಕಾಲವಾದರೇನು? ಎಷ್ಟು ದೂರವಿದ್ದರೇನು? ನಮ್ಮ ನಡುವಿನ ಸ್ನೇಹ ಬಾಂಧವ್ಯ ನಿತ್ಯ ಹಸಿರು ಅಂದುಕೊಂಡು ಈಗಲೂ ಬದುಕಬಹುದು ಅಲ್ಲವೆ?


ಮೊನ್ನೆ ರೂಮಿನಲ್ಲಿ ಮ್ಯಾಗಜಿನ್ ಓದುತ್ತಾ ಕುಳಿತಿದ್ದೆ. ನನ್ನ ಬಾಡಿಗೆ ರೂಮಿನ ಪಕ್ಕದ ಮನೆಯ ಮಕ್ಕಳು ಬೊಬ್ಬಿಟ್ಟ ಸದ್ದು ಕೇಳಿಸಿತು. ಹೊರ ಬಂದು ನೋಡಿದಾಗ ಅದರವ್ವ, 'ಮನೆಯೊಳಗೆ ಆಡೋದುಬಿಟ್ಟು ಇಲ್ಲಿ ಬಂದು ಮಣ್ಣಲ್ಲಿ ಆಡುತ್ತಿದ್ದೀರ? ನಡೀರಿ ಒಳಗೆ' ಅನ್ನುತ್ತ ಅವುಗಳ ಹಿಂದಕ್ಕೆರಡು ಬಿಗಿಯುತ್ತಿದ್ದಳು. ಆ ಮಹಾತಾಯಿಯನ್ನು ನೋಡುತ್ತಲೇ ನನ್ನ ಬಾಲ್ಯ ಕಾಲದ ಕುಡುಮನಹಳ್ಳಿ ನೆನಪಾಯಿತು. ಸಣ್ಣವನಿದ್ದಾಗ ನಾನೂ ಹೀಗೆ ದಿನಾ ಮಣ್ಣಲ್ಲಿ ಆಡುತ್ತಿದ್ದೆ. ನನ್ನವ್ವ ಒಂದೆರಡು ಸಾರಿ ಗದರಿದ್ದರೂ ಮತ್ತೆ ಮಕ್ಕಳುತಾನೆ, ಆಡಲಿ ಅಂತ ಸುಮ್ಮನಾಗುತ್ತಿದ್ದಳು. ಆಗಿನ ಆ ಚಿತ್ರಣ ಕಣ್ಣಮುಂದೆ ಅಡ್ಡಾಡುತ್ತಿದ್ದಾಗಲೇ ಇನ್ನೊಮ್ಮೆ ಮಕ್ಕಳ ಬೊಬ್ಬೆ ಕೇಳಿ ಎಚ್ಚೆತ್ತುಕೊಂಡೆ ಹೊರಬಂದೆ, ಮಕ್ಕಳ ತಾಯಿ ರಚ್ಚೆ ಹಿಡಿಯುತ್ತಿದ್ದ ಮಕ್ಕಳಿಗೆ ಇನ್ನೆರಡು ಬಿಗಿದು ಮನೆಯೊಳಗೆ ಎಳೆದೊಯ್ಯುತ್ತಿದ್ದಳು!

ಆಧುನಿಕ ಬದುಕಿನಲ್ಲೂ ಸಂಬಂಧ ಬೆಸೆಯಬಲ್ಲ ಸಣ್ಣ ಸಣ್ಣ ಸಂಗತಿಗಳು

1. ಎಷ್ಟೇ ಬ್ಯುಸಿ ಇರಲಿ, ಅಪರೂಪಕ್ಕಾದರೂ ನಮ್ಮ ಆಪ್ತ ಸ್ನೇಹಿತರೊಂದಿಗಿಷ್ಟು ಹೊತ್ತು ಆತ್ಮೀಯವಾಗಿ ಕಳೆಯೋಣ. ಸಂವಹನಕ್ಕಾಗಿ ಆಧುನಿಕ ಜಾಲತಾಣಗಳನ್ನೇ ಬಳಸೋಣ.

2. ಮಕ್ಕಳು ಕಾಮಿಕ್ ಸೀರಿಯಲ್ಗಳನ್ನು ಇಷ್ಟಪಡುತ್ತಾರೆ. ಅವರಿಗೆ ಇಷ್ಟವಾಗುವ ಉತ್ತಮ ಸೀರಿಯಲ್ಲುಗಳನ್ನೇ ವೀಕ್ಷಿಸೋಕೆ ಬಿಡೋಣ. ಜೊತೆಗೆ ಸೀರಿಯಲ್ಲುಗಳಲ್ಲಿ ಬರುವ ಛೋಟಾ ಭೀಮ್, ಟಾಮ್ ಆ್ಯಂಡ್ ಜೆರ್ರಿ, ಮಿಸ್ಟರ್ ಬೀನ್ ಪಾತ್ರಧಾರಿಗಳನ್ನು ಚಿತ್ರದಲ್ಲಿ ಬಿಡಿಸೋಕೆ ಆಗುತ್ತಾ ನೋಡು ಅಂತ ಹುರಿದುಂಬಿಸೋಣ. ಮಕ್ಕಳ ಸೀರಿಯಲ್ಲುಗಳನ್ನೇ ಬಳಸಿ ಮಕ್ಕಳಲ್ಲಿ ಹಾಡುವ, ಚಿತ್ರ ಬಿಡಿಸುವ, ಕತೆ ಬರೆಯುವ ಅಭಿರುಚಿಗಳನ್ನು ಬೆಳೆಸೋಕೆ ಪ್ರಯತ್ನಿಸೋಣ. (ಹಾಗಂತ ಮಕ್ಕಳನ್ನು ಒತ್ತಾಯ ಮಾಡುವುದು ಸರಿಯಲ್ಲ. ಅಭಿರುಚಿ ಬೆಳೆಸಲು ಪ್ರಯತ್ನಿಸುವುದಷ್ಟೇ ನಮ್ಮ ಕೆಲಸ!)

3. ಏನೇ ಘಟನೆಗಳು ಸಂಭವಿಸಿದಾಗಲೂ ಅದನ್ನು ಫೋಟೋ, ವೀಡಿಯೋ, ಸೆಲ್ಫಿ ತೆಗೆಯುವ ಟ್ರೆಂಡ್ ಈಗಿನದು. ಇರಲಿ, ಆದರೆ ಅವಘಡಗಳಾದಾಗ ಶೀಘ್ರ ರಕ್ಷಣೆಗೂ ಧಾವಿಸೋಕೆ ಮರೆಯದಿರೋಣವಷ್ಟೇ.

4. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಯಾಪ್, ಹೈಕ್ ಮುಂತಾದವುಗಳಿಗೆ ಕೆಲವರು ಅಡಿಕ್ಟ್ ಆಗಿರುತ್ತಾರೆ. ಹೆಚ್ಚು ಹೊತ್ತು ಅವುಗಳಲ್ಲೇ ಕಳೆಯುತ್ತಾರೆ. ಸಾಮಾಜಿಕ ಜಾಲತಾಣಗಳಿಂದ ನಮ್ಮ ಓದಿಗೆ, ಕೆಲಸಕ್ಕೆ, ಸಂಬಂಧಗಳಿಗೆ ತೊಂದರೆಯಾಗದಂತೆ ಸಣ್ಣದಾಗಿ ಎಚ್ಚರಿಕೆ ವಹಿಸೋಣ.

5. ಇಂಟರ್ನೆಟ್ಟನ್ನು ಹೆಚ್ಚಿನವರು ಬರೀ ಮನರಂಜನೆಗಾಗಿಯಷ್ಟೇ ಬಳಸುತ್ತಾರೆ. ಮನರಂಜನೆಯೊಂದಿಗೆ ಆಗೀಗ ಮಾಹಿತಿಪೂರ್ಣ ವಿಚಾರಗಳತ್ತ, ಅಪ್ಡೇಟೆಡ್ ಇಶ್ಯೂಗಳನ್ನತ್ತವೂ ಕೊಂಚ ಇಣುಕುನೋಟ ಹರಿಸುತ್ತಿರೋಣ.


-ಸದಾ ಸಕಲೇಶಪುರ. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು